ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸುಸ್ವಾಗತ
ಶ್ರೀ ಚಾಮುಂಡೇಶ್ವರಿ ಪೌರಾಣಿಕ ಹಿನ್ನಲೆಯುಳ್ಳ ದೇವತೆಯಾಗಿದ್ದು, 'ದೇವಿ ಮಹಾತ್ಮೆ' ಪುರಾಣದ ಪ್ರಮುಖ
ದೇವತೆಯಾಗಿದ್ದಾಳೆ. ಪೌರಾಣಿಕ ಹಿನ್ನಲೆಯ ಈ ಶಕ್ತಿ ದೇವತೆ ಬೆಟ್ಟದ ಮೇಲೆ ವಾಸವಾಗಿದ್ದ ಮಹಿಷಾಸುರನನ್ನು
ವಧಿಸಿದಳೆಂಬ ಕಥೆ 'ದೇವಿ ಮಹಾತ್ಮೆ' ಯಲ್ಲಿ ವರ್ಣಿತವಾಗಿದೆ. ಶ್ರೀ ಚಾಮುಂಡೇಶ್ವರಿಯಿಂದಲೇ ಈ ಬೆಟ್ಟಕ್ಕೆ
ಚಾಮುಂಡಿಬೆಟ್ಟ ವೆಂಬ ಹೆಸರು ಬಂದಿದೆ. ಸ್ಕಂದ ಪುರಾಣ ಮತ್ತಿತರ ಪ್ರಾಚೀನ ಗ್ರಂಥಗಳು ಎಂಟು ಬೆಟ್ಟಗಳಿಂದ
ಸುತ್ತುವರಿದ ತ್ರಿಮುಕುಟ ಕ್ಷೇತ್ರ ವೆಂಬ ಪವಿತ್ರ ಕ್ಷೇತ್ರವನ್ನು ಉಲ್ಲೇಖಿಸುತ್ತದೆ. ಆದರ ಪಶ್ಚಿಮ
ಭಾಗದಲ್ಲಿರುವ ಚಾಮುಂಡಿಬೆಟ್ಟವು ಎಂಟು ಬೆಟ್ಟಗಳ ಪೈಕಿ ಒಂದಾಗಿದೆ. ಚಾಮುಂಡಿಬೆಟ್ಟದಲ್ಲಿರುವ ಶ್ರೀ
ಮಹಾಬಲೇಶ್ವರ ದೇವಸ್ಥಾನವು ಅತ್ಯಂತ ಪ್ರಾಚೀನವಾದುದು. ಹಿಂದೆ ಬೆಟ್ಟವನ್ನು ಮಹಾಬಲಾದ್ರಿ ಎಂದೂ ಸಹ
ಕರೆಯಲಾಗುತ್ತಿತ್ತು.
ಹಿಂದೆ ಚಿಕ್ಕದೊಂದು ದೇವಸ್ಥಾನವಿದ್ದು, ಕ್ರಮೇಣ ಅಭಿವೃದ್ಧಿ ಹೊಂದಿ, ಹೆಚ್ಚಿನ ಪ್ರಾಮುಖ್ಯತೆ ಗಳಿಸಿ,
ಶ್ರೀ ಚಾಮುಂಡೇಶ್ವರಿ ದೇವಸ್ಥಾನವೆಂಬ ದೊಡ್ಡ ದೇವಸ್ಥಾನವಾಗಿ ಅಭಿವೃದ್ಧಿಯಾಗಿದೆ ಎಂದು ತಿಳಿದುಬರುತ್ತದೆ.
1799 ರಲ್ಲಿ ಅಧಿಕಾರಕ್ಕೆ ಬಂದ ಮೈಸೂರು ಅರಸರು ಈ ದೇವಿ ಅರಾಧಕರಾಗಿದ್ದು, ಶ್ರಧ್ದಾ ಭಕ್ತಿಯಿಂದ ದೇವಸ್ಥಾನವನ್ನು
ಅಭಿವೃದ್ಧಿಪಡಿಸಿ ಅದನ್ನು ದೊಡ್ಡದಾದ ದೇವಾಲಯವನ್ನಾಗಿಸಿದ್ದಾರೆ. ಹಾಗೂ ಹೆಚ್ಚಿನ ಮಹತ್ವ ತಂದಿದ್ದಾರೆ.
ಚಾಮುಂಡಿಬೆಟ್ಟ ಚಾರಿತ್ರಿಕ ಹಿನ್ನಲೆಯಲ್ಲಿ ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಅರಸರ ಕೊಡುಗೆಯಿದೆ.
12ನೇ ಶತಮಾನದ ಹೊಯ್ಸಳ ದೊರೆ ವಿಷ್ಣುವರ್ಧನ ಹಾಗೂ 17ನೇ ಶತಮಾನದ ವಿಜಯನಗರದ ಅರಸರ ಹಿನ್ನಲೆಯನ್ನು
ಗುರುತಿಸಲಾಗಿದೆ. ಕ್ರಿ.ಶ. 1573 ರಲ್ಲಿ ಚಾಮರಾಜ ಒಡೆಯರು ದೇವಿಯನ್ನು ಪೂಜಿಸಲು ಹೋಗುತ್ತಿದ್ದಾಗ
ಅವರಿಗೆ ಸಿಡಿಲು ಬಡಿದು ಅವರ ತಲೆಯ ಕೂದಲೆಲ್ಲಾ ಉದುರಿ ಹೋದವೆಂದು ಇತಿಹಾಸ ಹೇಳುತ್ತದೆ.
ಇನ್ನಷ್ಟು ತಿಳಿಯಿರಿ...